ಮನೋಭಾಷಾವಿಜ್ಞಾನ	 -
ಅನ್ವಯಿಕ ಭಾಷಾವಿಜ್ಞಾನದ ಒಂದು ಶಾಖೆ. ಮನೋವೈಜ್ಞಾನಿಕ ಮತ್ತು ಭಾಷಿಕ ವರ್ತನೆಗಳ ಅಂತರಸಂಬಂಧ ಕುರಿತ ಅಧ್ಯಯನ (ಸೈಕೊಲಿಂಗ್ವಿಸ್ಟಿಕ್ಸ್) ಮನೋವಿಜ್ಞಾನ ಮತ್ತು ಭಾಷಾವಿಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ವಿಚಾರಗಳನ್ನು ಭಾಷಿಕ ಮುನ್ನಲೆಯಲ್ಲಿ ಪರಿಶೀಲಿಸಿ ಫಲಿತಾಂಶ ಕಂಡುಕೊಳ್ಳುವ ಪ್ರಯತ್ನದಿಂದ ಈ ಶಾಖೆ ಜನ್ಮತಾಳಿತು. 1954ರಲ್ಲಿ ಸಮಾಜವಿಜ್ಞಾನ ಸಂಶೋಧನ ಸಮಿತಿಯ ಆಶ್ರಯದಲ್ಲಿ ಅಮೆರಿಕೆಯಲ್ಲಿ ನಡೆದ ಮನೋಭಾಷಾ ವಿಜ್ಞಾನ ವಿಚಾರಗೋಷ್ಠಿಯ ನಡವಳಿಕೆಗಳನ್ನು ಚಾಲ್ರ್ಸ್ ಇ. ಆಸ್ ಗುಡ್ ಮತ್ತು ತಾಮಸ್ ಎ. ಸೀಬಿಯಾಕ್ ಅವರು ಗ್ರಂಥ ರೂಪದಲ್ಲಿ ಹೊರತಂದ ಮೇಲೆ ಈ ವಿಷಯದ ಅಧ್ಯಯನಕ್ಕೆ ಹೆಚ್ಚಿನ ಚಾಲನೆ ಮತ್ತು ಆಯಾಮ ದೊರೆತವು.

ಮನೋಭಾಷಾ ವಿಜ್ಞಾನದಲ್ಲಿ ಭಾಷೆಯನ್ನು ಪ್ರಚೋದನೆ ಮತ್ತು ಪ್ರಕ್ರಿಯೆಗಳ ರೂಪದಲ್ಲಿ ಪರಿಗಣಿಸಲಾಗುತ್ತದೆ. ಚಿಹ್ನೆ, ಅಭಿವ್ಯಕ್ತಿ ಮತ್ತು ಸಂಕೇತ : ಉಚ್ಚಾರಣಾತ್ಮಕ, ತರಂಗಾತ್ಮಕ ಹಾಗೂ ಶ್ರವ್ಯಾತ್ಮಕ ಪ್ರತಿಕ್ರಿಯೆಗಳು : ಅಭಿವ್ಯಕ್ತಿ ಮತ್ತು ಗ್ರಹಿಕೆ ಸಾಮಥ್ರ್ಯ: ಭಾಷಾಗ್ರಹಿಕೆಯಲ್ಲಿ ವಿಭೇದಕ ಪ್ರಕ್ರಿಯೆಗಳು : ಭಾಷಾ ರಚನೆಯ ಸಂಭಾವ್ಯತಾ ಉಚ್ಚಾರಣೆ ಮತ್ತು ಅಂಗಚಾಲನೆಗಳ ಸಾಹಚರ್ಯ: ಸಾಹಚರ್ಯೆ ಮತ್ತು ಸಂದರ್ಭ. ಅರ್ಥಸ್ಪುರಣ ಮತ್ತು ಸಂದರ್ಭ. ಅರ್ಥಸ್ಪುರಣ, ವರ್ತನೆಯ ರೂಪದಲ್ಲಿ ಅರ್ಥ; ಭಾಷಾ ಪ್ರಕ್ರಿಯೆಗಳಲ್ಲಿ ಮಧ್ಯವರ್ತಿಗಳು; ಆರ್ಥಾನುಕೂಲನ ಧ್ವನಿಗಳ ಪುನರುತ್ಪಾದನೆ ಮತ್ತು ಸಾಕೇತಿಕ ರಚನಾತ್ಮಕ ಮತ್ತು ಅಥಾತ್ಮಕ ಆಯ್ಕೆಗಳು; ಭಾಷೆಯ ಅಂತಕ್ರಿಯೆ ಮತ್ತು ಒಟ್ಟು ಸಂದರ್ಭ : ಪ್ರಾಣಿಗಳಲ್ಲಿ ಅಭಿವ್ಯಕ್ತಿ ಇವು ಮನೋಭಾಷಾವಿಜ್ಞಾನದ ಅಧ್ಯಯನದ ವಿಷಯಗಳು.

ಮಕ್ಕಳು ಭಾಷೆಯನ್ನು ಹೇಗೆ ಗಳಿಸಿಕೊಳ್ಳುತ್ತಾರೆ ಎಂಬ ವಿಷಯಕ್ಕೆ ಮನೋಭಾಷಾ ವಿಜ್ಞಾನ ಹೆಚ್ಚು ಒತ್ತು ಕೊಡುತ್ತದೆ. ಇಲ್ಲಿ ಭಾಷೆಯನ್ನು ಮಕ್ಕಳು ಕಲಿಯುತ್ತಾರೆ (ಲರ್ನ್) ಎಂಬುದಕ್ಕಿಂತ ಗಳಿಸುತ್ತಾರೆ (ಅಕ್ವೈರ್) ಎಂಬುದು ಮುಖ್ಯ. ಏಕೆಂದರೆ ಮನೋವಿಜ್ಞಾನಿಗಳು ಕಲಿಕೆ ಎಂಬುದನ್ನು ಸಂಕೀರ್ಣ ಪಾರಿಭಾಷಿಕ ಅರ್ಥದಲ್ಲಿ ಬಳಸಿಕೊಂಡಿದ್ದಾರೆ. ಮಕ್ಕಳು ಯಾವುದೇ ಪೂರ್ವಭಾವಿ ಪರಿಜ್ಞಾನವಿಲ್ಲದೆ ಒಂದು ಭಾಷೆಯನ್ನು, ವಿಶೇಷವಾಗಿ ತಮ್ಮ ಮಾತೃಭಾಷೆಯನ್ನು ಹೇಗೆ ತ್ವರಿತವಾಗಿ ಕಲಿಯಲು ಸಮರ್ಥರಾಗುತ್ತಾರೆ. ಹಾಗೂ ಆ ಭಾಷೆಯ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಾರೆ ಎಂಬ ವಿಷಯವಾಗಿ ನಡೆಸಲಾಗುತ್ತಿರುವ ಅಧ್ಯಯನ ಈ ಕ್ಷೇತ್ರಕ್ಕೆ ಮೂಲ ಆಧಾರ ಚೌಕಟ್ಟನ್ನು ಒದಗಿಸುತ್ತದೆ. ಅಲ್ಪಾವಧಿಯ ಮತ್ತು ದೀರ್ಘಾವಧಿಯ ನೆನಪುಗಳು, ಭಾಷಾ ಮಾದರಿಗಳನ್ನು ಆಧರಿಸಿ ಭಾಷಾಗ್ರಹಣ ಮತ್ತು ಅರ್ಥವಿಸುವಿಕೆ ಮುಂತಾದ ವಿಚಾರಗಳನ್ನೊಳಗೊಂಡಂತೆ ಸಂಶೋಧನೆಗಳು ನಡೆಯುತ್ತಿವೆ. ಈ ಸಂಕೀರ್ಣ ಪ್ರಕ್ರಿಯೆಯನ್ನು ಇಂದಿನ ಯಾವುದೇ ಮನೋವೈಜ್ಞಾನಿಕ ಸಿದ್ಧಾಂತಗಳ ಮುನ್ನಲೆಯಲ್ಲಿ ತೃಪ್ತಿಕರವಾಗಿ ವಿವರಿಸುವುದು ಸಾಧ್ಯವಿಲ್ಲವೆಂಬುದು ಅನೇಕ ಮಂದಿ ಮನೋವಿಜ್ಞಾನಿಗಳ ಅಭಿಪ್ರಾಯ.

1960ರ ತರುವಾಯ ನಡೆದ ಮನೋವೈಜ್ಞಾನಿಕ ಸಂಶೋಧನೆಗಳು ನೋಮ್ ಚಾಮ್‍ಸ್ಕಿ ಪ್ರತಿಪಾದಿಸಿದ ಉತ್ಪಾದನಾತ್ಮಕ ವ್ಯಾಕರಣ ಸಿದ್ಧಾಂತದ (ಥಿಯರಿ ಆಫ್ ಜನರೇಟಿವ್ ಗ್ರಾಮರ್) ಪ್ರಭಾವಕ್ಕೆ ಒಳಗಾಗಿದೆ. ವ್ಯಾಕರಣನಿಯಮಗಳನ್ನು ಚಿಕ್ಕ ಮಕ್ಕಳು ಹೇಗೆ ಗ್ರಹಿಸುತ್ತಾರೆ, ಮೊದಲೆಂದೂ ಕೇಳರಿಯದ ಶಬ್ದಗಳಿಂದ ವಾಕ್ಯ ರಚಿಸಲು ಈ ನಿಯಮಗಳನ್ನು ಹೇಗೆ ಸಮರ್ಥವಾಗಿ ಬಳಸಿ ಕೊಳ್ಳುತ್ತಾರೆ ಎಂಬ ವಿಷಯವಾಗಿಯೂ ಈ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರು ಜಿಜ್ಞಾಸೆ ಹೊಂದಿದ್ದಾರೆ. ಮಕ್ಕಳು ಎಲ್ಲ ಭಾಷೆಗಳ ವ್ಯಾಕರಣ ರಚನೆಯನ್ನು ಸಾರ್ವತ್ರಿಕವಾಗಿ ನಿರ್ಧರಿಸುವ ಔಪಚಾರಿಕ ನಿಯಮಗಳ ತಿಳಿವಳಿಕೆ ಪಡೆದುಕೊಂಡಿರುತ್ತಾರೆ. ಈ ಮೂಲಭೂತ ಅರಿವೇ ಅವರು ಭಾಷೆ ಕಲಿಯಲು ನೆರವಾಗುತ್ತದೆ ಎಂಬುದು ಚಾಮ್ ಸ್ಕಿಯ ಅಭಿಪ್ರಾಯದಂತೆ ಮಕ್ಕಳಲ್ಲಿ ಮೂಲಭೂತವಾಗಿ ಅಡಗಿರುವುದು ವ್ಯಾಕರಣ ನಿಯಮಗಳ ಪೂರ್ವಜ್ಞಾನ ಅಲ್ಲ. ಅದಕ್ಕೂ ಮಿಗಿಲಾಗಿ ಅವರಲ್ಲಿ ಕೆಲವು ಸಾರ್ವತ್ರಿಕ ಸಂಜ್ಞಾನಾತ್ಮಕ (ಕಾಗ್ನಿಟಿವ್) ತತ್ತ್ವಗಳು ಅಡಕವಾಗಿರುತ್ತವೆ. ನಿರ್ದಿಷ್ಟ ಸಂದರ್ಭದಲ್ಲಿ ಅವನ್ನು ಮೌಖಿಕ ಉದ್ಗಾರಗಳಿಗೆ ಅನ್ವಯಿಸುವುದರಿಂದ ವ್ಯಾಕರಣ ಸಾಮಥ್ರ್ಯ ಹುಟ್ಟುತ್ತದೆ. ಯಾವುದೇ ಭಾಷಾಭೇದವಿಲ್ಲದೆ ಎಲ್ಲ ಮಕ್ಕಳೂ ಭಾಷಾರ್ಜನೆಯಲ್ಲಿ ಒಂದೇ ರೀತಿಯ ಹಂತಗಳಲ್ಲಿ ಮುಂದುವರೆಯುತ್ತಾರೆಂದು ಇಂದಿನ ಸಂಶೋಧನೆಗಳು ಶ್ರುತಪಡಿಸಿವೆ. ಪ್ರಪಂಚದ ಬೇರೆಬೇರೆ ಸಂಸ್ಕøತಿಗಳಿಗೆ ಸೇರಿದ ಭಾಷೆಗಳನ್ನಾಡುವ ಮಕ್ಕಳ ಮೊದಲ ನುಡಿಗಳಲ್ಲಿ ಒಂದೇ ಬಗೆಯ ಅರ್ಥವರ್ಗಗಳು ಹಾಗೂ ವ್ಯಾಕರಣಸಂಬಂಧ ಪ್ರಕ್ರಿಯೆಗಳು ಇರುತ್ತವೆಂದು ದೃಢಪಟ್ಟಿದೆ. ಕರ್ತರಿ ಪ್ರಯೋಗಕ್ಕಿಂತ ಕರ್ಮಣಿ ಪ್ರಯೋಗಗಳನ್ನು ಪ್ರಕ್ರಿಯೆಗೊಳಪಡಿಸಲು ಹೆಚ್ಚು ಸಮಯ ಬೇಕಾಗುತ್ತದೆಂದು ಪ್ರಯೋಗಗಳಿಂದ ಗೊತ್ತುಪಡಿಸಲಾಗಿದೆ. ಏಕೆಂದರೆ ಕರ್ತರಿಗಿಂತ ಕರ್ಮಣಿಯಲ್ಲಿ ವ್ಯಾಕರಣ ನಿಯಮಗಳು ಹೆಚ್ಚು.
ಭಾಷಾ ಉದ್ಗಾರಗಳ ಉತ್ಪಾದನೆ ಮತ್ತು ಪರಿಗ್ರಹಣಕ್ಕೆ ಸಂಬಂಧಪಟ್ಟಂತೆ ಯಾವುದೇ ಬಗೆಯ ಮಾದರಿಯನ್ನು ಒದಗಿಸುವ ಉದ್ದೇಶವನ್ನು ಉತ್ಪಾದನಾತ್ಮಕ ವ್ಯಾಕರಣ ಇಟ್ಟುಕೊಂಡಿಲ್ಲವೆಂದು ಚಾಮ್‍ಸ್ಕಿ ತನ್ನ ಮೊದಲ ಬರವಣಿಗೆಯಲ್ಲೇ ಸ್ಪಷ್ಟಪಡಿಸಿದ್ದ. ಭಾಷೆಯ ವಿವರಣೆ ಕೊಡಲು ಹೋದ ಉತ್ಪಾದನಾತ್ಮಕ ವ್ಯಾಕರಣಕಾರರು ಮುಂದಿಟ್ಟ ಅನೇಕ ಭಾವನೆಗಳನ್ನು ಮತ್ತು ಪ್ರಕ್ರಿಯೆಗಳನ್ನು ಮನೋವೈಜ್ಞಾನಿಕವಾಗಿ ನಿಜವೆಂದು ಬಗೆದ ಕೆಲವು ಮಂದಿ ತಮ್ಮ ಸಂಶೋಧನೆಯ ಮುನ್ನೆಲೆಯಲ್ಲಿ ಅವನ್ನೇ ಎತ್ತಿಹಿಡಿಯಲು ಪ್ರಯತ್ನಿಸಿದರು. 1960ರ ದಶಕದಲ್ಲಿ ನಡೆಸಿದ ಪ್ರಯೋಗಗಳು ಸರಳ ವಾಕ್ಯಗಳಿಗಿಂತ ಸರಳವಲ್ಲದ ವಾಕ್ಯಗಳು ಮಾನಸಿಕ ಪ್ರಕ್ರಿಯೆಗೆ ಒಳಪಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತೋರಿಸಿದುವು. ಉದಾಹರಣೆಗೆ ಅವನು ನೋಡಿದ ಎಂಬ ವಾಕ್ಯವನ್ನು ಮಾನಸಿಕ ಪ್ರಕ್ರಿಯೆಗೆ ಒಳಪಡಿಸಿ ಅರ್ಥವಿಸಲು ಹಿಡಿಯುವ ಸಮಯಕ್ಕಿಂತ ಅವನು ನೋಡಲಿಲ್ಲ ಅವನಿಂದ ನೋಡಲ್ಪಡಲಿಲ್ಲ ಎಂಬ ವಾಕ್ಯಗಳನ್ನು ಅರ್ಥವಿಸಲು ಹಿಡಿಯಲು ಸಮಯವೂ ಹೆಚ್ಚಾಯಿತು. ಉತ್ಪಾದನಾತ್ಮಕ ವ್ಯಾಕರಣದ ಬೆಳವಣಿಗೆಯಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗಿರುವ ಮನೋಭಾಷಾವಿಜ್ಞಾನದ ಮತ್ತೊಂದು ಕ್ಷೇತ್ರಭಾಷಾಗ್ರಹಿಕೆ. ಭಾಷಾಧ್ವನಿಗಳನ್ನು ಮತ್ತು ಅವುಗಳಿಂದ ಉಂಟಾಗಿರುವ ಪದರೂಪಗಳನ್ನು ಗುರುತಿಸುವಲ್ಲಿ ಸಂದರ್ಭ ಮುಖ್ಯಪಾತ್ರವಹಿಸುತ್ತದೆ. ಭಾಷಾಗ್ರಹಿಕೆಯ ಬಗೆಗೆ 1950ರ ದಶಕದ ಉದ್ದಕ್ಕೂ ನಡೆದಿದ್ದ ಕೆಲಸ ಮಾಹಿತಿ ಸಿದ್ಧಾಂತದ ಪ್ರಕಾರ ಪದವೊಂದರ ಪ್ರತಿಯೊಂದು ಧ್ವನಿ ಹಾಗೂ ವಾಕ್ಯ ಒಂದರಲ್ಲಿಯ ಪ್ರತಿಯೊಂದು ಪದ ಸಂಖ್ಯಾತ್ಮಕವಾಗಿ ಹಿಂದಿನ ಧ್ವನಿಗಳನ್ನೂ ಪದಗಳನ್ನೂ ಅವಲಂಬಿಸಿರುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಭಾಷಾಗ್ರಹಿಕೆಯಲ್ಲಿ ಶ್ರವಣಸಂಬಂಧ ಅಂಶಗಳು ಒದಗಿಸುವ ಮೊದಲ ಸಂಕೇತಗಳನ್ನು ಅರ್ಥವಿಸಲಾಗುತ್ತದೆ. ಇವು ಅಪ್ರಜ್ಞಾಪೂರ್ವಕವಾಗಿದ್ದು ತೀವ್ರವೇಗದಿಂದ ಕೂಡಿರುತ್ತವೆ. ಈ ರೀತಿಯಾಗಿ ಅರ್ಥವಿಸಬೇಕಾದರೆ ಕೇವಲ ಭಾಷೆಯ ಧ್ವನ್ಯಾತ್ಮಕ ರಚನೆಯನ್ನು ಮಾತ್ರವಲ್ಲದೆ ಅಮೂರ್ತವಾದ ಭಾಷಾ ವ್ಯವಸ್ಥೆಯ ಮಟ್ಟಗಳನ್ನೂ ಆಧಾರವಾಗಿಟ್ಟುಕೊಳ್ಳಲಾಗುತ್ತದೆ.

ವಾಕ್‍ಶ್ರವಣ ಅಧ್ಯಯನ ಮತ್ತು ಸಂಶೋಧನೆಗಳನ್ನು ವೈದ್ಯಕೀಯ ವಿಚಾರಗಳಿಗೆ ಸಂಬಂಧಿಸಿದಂತೆಯೂ ನಡೆಸಲಾಗುತ್ತದೆ. ಈ ದಿಶೆಯಲ್ಲಿ ಮನೋಭಾóಷಾ ವಿಜ್ಞಾನದ ಕೊಡುಗೆ ಗಮನಾರ್ಹ. ವೈದ್ಯಕೀಯ ಪರಿಭಾಷೆಯಲ್ಲಿ ಭಾಷಾವಿಕೃತಿಗಳನ್ನು ವಾಕ್ ಆಘಾತ (ಅಫೇಸಿಯ) ಎಂದು ಕರೆಯುತ್ತಾರೆ. ಮಿದುಳಿಗೆ ಉಂಟಾಗುವ ನಿರ್ದಿಷ್ಟ ರೀತಿಯ ಅಘಾತದಿಂದ ಇದು ಸಂಭವಿಸುತ್ತದೆ. ಮಿದುಳಿಗೆ ಅಘಾತ ಉಂಟಾದಾಗ ವಿವಿಧ ರೀತಿಯ ಭಾಷಾಮಾಹಿತಿಗಳನ್ನು ಶೇಖರಿಸುವ ಮತ್ತು ಪ್ರಕ್ರಿಯೆಗೆ ಒಳಪಡಿಸುವ ಮಿದುಳಿನ ಭಾಗ ಕುಂಠಿತಗೊಂಡಿರುತ್ತದೆ. ಮಿದುಳಿಗೂ ಭಾಷೆಗೂ ಮನಸ್ಸಿಗೂ ಯಾವ ರೀತಿ ಸಂಬಂಧ ಏರ್ಪಡುತ್ತದೆಂಬುದೂ ಜಿಜ್ಞಾಸೆಯ ವಿಷಯ. ಒಬ್ಬ ಭಾಷಾವಿಜ್ಞಾನಿ ಮುಂದಿಟ್ಟಿರುವ ವಾದದ ಪ್ರಕಾರ ಭಾಷೆಯಲ್ಲಿ ಅತ್ಯಂತ ಮೂಲಭೂತ ವ್ಯತ್ಯಾಸಗಳನ್ನು ಕಂಡುಕೊಳ್ಳುವಲ್ಲಿ ಮಕ್ಕಳೇ ಮೊದಲಿಗರು. ಹಾಗೆಯೆ ಎಳೆತನದಲ್ಲಿ ಅಚ್ಚೊತ್ತಿದ ವಿಚಾರಗಳು ವಾಕ್-ಆಘಾತದಲ್ಲಿ ಸುಲಭವಾಗಿ ನಶಿಸಿಹೋಗತಕ್ಕವಲ್ಲ ಎಂಬುದಾಗಿ ಭಾಷಾತಜ್ಞನೊಬ್ಬ ಅಭಿಪ್ರಾಯಪಟ್ಟಿದ್ದಾನೆ. ಇದು ವಿವಾದಾಸ್ಪದವಾಗಿದೆ. ವಾಕ್-ಆಘಾತದಲ್ಲಿ ಸಾಮಾನ್ಯವಾಗಿ ಎರಡು ಬಗೆ ಸಂವೇದಕ ವಾಕ್-ಆಘಾತ ಮತ್ತು ಪ್ರೇರಕ ವಾಕ್-ಆಘಾತದಲ್ಲಿ ರೋಗಿಯ ಮಾತುಗಾರಿಕೆಗೆ ಧಕ್ಕೆಯೊದಗಿರುವುದಿಲ್ಲ. ಆತನ ಗ್ರಹಿಕೆ ಮಾತ್ರ ಏರುಪೇರಾಗಿರುತ್ತದೆ. ಅವನಾಡುವ ಮಾತುಗಳಲ್ಲಿ ಕೆಲವೊಮ್ಮೆ ಪರಸ್ಪರ ಸಂಬಂಧ ಇರುವುದಿಲ್ಲ. ಪ್ರೇರಕ ವಾಕ್-ಆಘಾತದಲ್ಲಿ ರೋಗಿ ಭಾಷೆಯನ್ನು ಉಚ್ಚರಿಸುವಲ್ಲಿ ಅಥವಾ ಬರೆಯುವಲ್ಲಿ ಕಷ್ಟಪಡುತ್ತಾನೆ. ಸರಳಗೊಳಿಸಿದ ವ್ಯಾಕರಣ ರಚನೆಗಳನ್ನೊಳಗೊಂಡಂತೆ ಅವನು ಮಾತಾಡಬಹುದು. ಅವನ ಗ್ರಹಿಕೆಗೆ ಧಕ್ಕೆಯೊದಗಿರುವುದಿಲ್ಲ.

ವಾಕ್-ಆಘಾತದ ಭಾಷಿಕ ಮತ್ತು ವೈದ್ಯಕೀಯ ವಿಶ್ಲೇಷಣೆ ನರಭಾಷಾವಿಜ್ಞಾನದತ್ತ (ನ್ಯೂರೋಲಿಂಗ್ವಿಸ್ಟಿಕ್ಸ್) ಕೊಂಡೊಯ್ಯುತ್ತದೆ. ಪ್ರೇರಕ ವಾಕ್-ಆಘಾತ ಉಂಟಾಗಲು ಮಿದುಳಿನ ಎಡಗಡೆಯ ಗೋಳಾರ್ಧದ ಮೂರನೆಯ ಹಣೆಮಡಿಕೆಯಲ್ಲಿ ವಿಕೃತಿಯಾಗುವುದೇ ಕಾರಣ. ಬ್ರೋಕಾನ ಕ್ಷೇತ್ರವೆಂದು ಕರೆಯುವ ಈ ಭಾಗಕ್ಕೂ ಪ್ರೇರಕ ವಾಕ್-ಆಘಾತಕ್ಕೆ ಕಾರಣವನ್ನು ಹುಡುಕಲಾಯಿತು. ಅದು ಸಂಭವಿಸಲು ಮಿದುಳಿನ ಎಡಭಾಗದ ಹಾಲೆಯ ಹಿಂಭಾಗದಲ್ಲಿ ಉಂಟಾಗುವ ವಿಕೃತಿಯೇ ಕಾರಣವೆಂದು ಕಂಡುಹಿಡಿಯಲಾಯಿತು. ಈಚಿನ ಸಂಶೋಧನೆಗಳು ಅವನ್ನು ದೃಢಪಡಿಸಿವೆ. ಪ್ರಜ್ಞೆಯಿರುವ ರೋಗಿಯ ಮಿದುಳಿನ ಬೂದುವರ್ಣ ಪದಾರ್ಥದ ಹೊರ ಆವರಣವನ್ನು ವಿದ್ಯುತ್ತಿನ ಮೂಲಕ ಉತ್ತೇಜಿಸುವ ತಂತ್ರ ಬಳಸಿ ತಾತ್ಕಾಲಿಕ ವಾಕ್-ಆಘಾತ ಉಂಟುಮಾಡಿ ಆ ಮೂಲಕ ಮಿದುಳಿನಲ್ಲಿರುವ ಮಾತಿನ ಕ್ಷೇತ್ರವನ್ನು (ಸ್ಟೀಚ್ ಸೆಂಟರ್) ಅನ್ವೇಷಿಸಲು ನರಶಾಸ್ತ್ರವೈದ್ಯರು ಪ್ರಯತ್ನಪಡುತ್ತಿದ್ದಾರೆ. ಮಾತಿನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಿದುಳಿನಲ್ಲಿ ವಿಶಿಷ್ಟ ಕೆಲಸ ಮಾಡುವ ಪ್ರಜ್ಞಾಪೂರ್ವಕ ಕೇಂದ್ರಗಳಿವೆಯೆಂಬ ಮಾತಿಗೆ ಇಂದಿನ ದಿನಗಳಲ್ಲಿ ಅಷ್ಟಾಗಿ ಪುಷ್ಟಿ ದೊರೆಯುತ್ತಿಲ್ಲ. ಆದರೆ ಇಂಥದೊಂದು ಮಾತಿನ ಕ್ಷೇತ್ರ ಮಿದುಳಿನಲ್ಲಿರುವ ಮುಖ್ಯ ಗೋಳವೊಂದರಲ್ಲಿ (ಎಡಗೋಳಾರ್ಧ) ಇದೆಯೆಂಬುದು ಸ್ಪಷ್ಟವಾಗಿದೆ. ಈ ಕ್ಷೇತ್ರದ ಹಿಂಭಾಗ ಭಾಷೆಯನ್ನು ಅರ್ಥಮಾಡಿಕೊಳ್ಳಲು ವ್ಯಾಕರಣಬದ್ಧವೂ ಅರ್ಥಪೂರ್ಣವೂ ಆದ ರಚನೆಗಳನ್ನು ಉಂಟುಮಾಡಲು ನೆರವಾಗುತ್ತದೆ. ಮುಂಭಾಗ ಮಾತನಾಡಲು ಮತ್ತು ಬರೆಯಲು ಸಹಾಯ ಒದಗಿಸುತ್ತದೆ ಎಂಬುದಾಗಿ ಈ ಕ್ಷೇತ್ರದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಭಾಷೆಯ ಅಭಿವ್ಯಕ್ತಿ ಮತ್ತು ಗ್ರಹಿಕೆಗೆ ಸಂಬಂಧಪಟ್ಟಂತೆ ಸಂಗ್ರಹಣ ಮತ್ತು ಪ್ರಕ್ರಿಯೆಗಳ ಹಿನ್ನಲೆಯಲ್ಲಿರುವ ನರವ್ಯೂಹದ ಕಾರ್ಯಕುಶಲತೆಯ ಬಗ್ಗೆ ಹೆಚ್ಚಿನ ವಿವರ ತಿಳಿದುಬಂದಿಲ್ಲ.			
(ಎಸ್.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ